ಗ್ರೀಲಿ, ಹಾರೇಸ್ -
1811-1872. ಅಮೆರಿಕನ್ ಪತ್ರಿಕೋದ್ಯಮಿ ಮತ್ತು ರಾಜಕಾರಣಿ. ಏಬ್ರಹಾಂ ಲಿಂಕನನ ಸಮಕಾಲೀನ. 1811ರ ಫೆಬ್ರುವರಿ 3ರಂದು ಆಮ್‍ಹಸ್ರ್ಟ್ ಬಳಿ ಬಡ ರೈತಕುಟುಂಬವೊಂದರಲ್ಲಿ ಜನಿಸಿದ. ಗ್ರೀಲಿಯ ಜೀವನದ ಆರಂಭದ ದಿನಗಳು ಕಷ್ಟಕರವಾಗಿದ್ದುವು. ಅವನು ಹೆಚ್ಚು ಶಿಕ್ಷಣ ಪಡೆಯಲಾಗಲಿಲ್ಲ. ಬಾಲ್ಯದಲ್ಲೇ ಅವನಿಗೆ ಮುದ್ರಣಕಲೆಯಲ್ಲಿ ಆಸಕ್ತಿ ಹುಟ್ಟಿತು. 14ನೆಯ ವಯಸ್ಸಿನಲ್ಲಿ ಆತ ಈಸ್ಟ್ ಪಾಲ್ಟ್ನೆಯಲ್ಲಿ ನಾರ್ದರ್ನ್ ಸ್ಪೆಕ್ಟೇಟರ್ ಪತ್ರಿಕಾ ಕಚೇರಿಯಲ್ಲಿ ಅಭ್ಯಾಸಿಯಾಗಿ ಸೇರಿದ. ಐದು ವರ್ಷಗಳ ಕಾಲ ಅಲ್ಲಿದ್ದು, ಅದೃಷ್ಟವನ್ನರಸುತ್ತ ನ್ಯೂಯಾರ್ಕಿಗೆ ಹೋದ. ನ್ಯೂಯಾರ್ಕಿನಲ್ಲಿ ಒಂದೂವರೆ ವರ್ಷಕಾಲ ಕಾರೇಗಾರನಾಗಿ ಕೆಲಸ ಮಾಡಿದ ಮೇಲೆ ಗ್ರೀಲಿಯೂ ಅವನ ಮಿತ್ರನೊಬ್ಬನೂ ಸೇರಿ ಸಣ್ಣ ಮುದ್ರಣಾಲಯವೊಂದನ್ನು ಸ್ಥಾಪಿಸಿದರು. 1834ರಲ್ಲಿ ನ್ಯೂ ಯಾರ್ಕರ್ ಎಂಬ ಸಾಹಿತ್ಯ ಪತ್ರಿಕೆಯೊಂದನ್ನು ಆರಂಭಿಸಿ, ಅದಕ್ಕೆ ಜ್ಯೇಷ್ಠ ಸಂಪಾದಕನಾದ. 1836ರಲ್ಲಿ ಮೇರಿ ಯಂಗ್ಸ್ ಚೇನಿ ಎಂಬ ಶಾಲಾಧ್ಯಾಪಕಿಯನ್ನು ಮದುವೆಯಾದ. ನ್ಯೂ ಯಾರ್ಕರ್ ಪತ್ರಿಕೆ ಕುಂಟುತ್ತ ಸಾಗುತ್ತಿತ್ತು. ಕ್ರಮೇಣ ಗ್ರೀಲಿಯ ಆಸಕ್ತಿ ಸಾಹಿತ್ಯದಿಂದ ರಾಜಕಾರಣದತ್ತವಾಲಿತು. ಗ್ರೀಲಿ ರಾಷ್ಟ್ರಾಭಿಮಾನವುಳ್ಳವನೂ ಮಾನವೀಯ ದೃಷ್ಟಿ ತಳೆದವನೂ ಆಗಿದ್ದನಾದರೂ ತೀವ್ರಗಾಮಿ ಕ್ರಮಗಳಲ್ಲಿ ಅವನಿಗೆ ನಂಬಿಕೆಯಿರಲಿಲ್ಲ. ಅವನು ವ್ಹಿಗ್ ಆಗಿದ್ದ. ವ್ಹಿಗ್ ಪಕ್ಷದವರು ಅಮೆರಿಕನ್ ಕ್ರಾಂತಿಗೆ ಬೆಂಬಲ ನೀಡುವವರೂ ಡೆಮೊಕ್ರಾಟ್ ವಿರೋಧಿ ಭಾವನೆಗಳುಳ್ಳವರೂ ಆಗಿದ್ದರು. ಆತ ನ್ಯೂಯಾರ್ಕರಿನಲ್ಲಿ ಬರೆಯುತ್ತಿದ್ದ ಲೇಖನಗಳು ವ್ಹಿಗ್ ನಾಯಕರ ಗಮನ ಸೆಳೆದುವು. ಅವರ ಅಪೇಕ್ಷೆಯಂತೆ ಜೆಫರ್ಸನಿಯನ್ ಎಂಬ ವ್ಹಿಗ್ ಪ್ರಚಾರ ಪತ್ರಿಕೆ ಹೊರಡಿಸಿದ (1838). 1840ರಲ್ಲಿ ಇಂಥದೇ ಉದ್ದೇಶವುಳ್ಳ ಲಾಗ್ ಕ್ಯಾಬಿನ್ ಎಂಬ ಪತ್ರಿಕೆ ಹೊರಡಿಸಿದವನೂ ಈತನೇ. ಇವೆರಡೂ ತುಂಬ ಯಶಸ್ಸು ಗಳಿಸಿದುವು. ವ್ಹಿಗ್ ಪಕ್ಷದೊಂದಿಗೆ ಇವನ ಬಾಂಧವ್ಯವೂ ಬೆಳೆಯಿತು. ಈ ಪತ್ರಿಕೆಗಳ ಯಶಸ್ಸಿನಿಂದಾಗಿ ಈತ 1841ರಲ್ಲಿ ನ್ಯೂ ಯಾರ್ಕ್ ಟ್ರಿಬ್ಯೂನ್ ಎಂಬ ದಿನಪತ್ರಿಕೆ ಪ್ರಾರಂಭಿಸಿದ. ಇದು ಸುಧಾರಣೆ, ಆರ್ಥಿಕ ಪ್ರಗತಿ, ಜನತೋದ್ಧಾರ ಇವು ಗುರಿಗಳಾಗಿ ಉಳ್ಳ ವ್ಹಿಗ್ ಪತ್ರಿಕೆಯಾಗಿತ್ತು. ಸುದ್ದಿ ಸಂಪಾದನೆ, ಬೌದ್ಧಿಕ ಮೌಲ್ಯ, ನೈತಿಕ ಶ್ರದ್ಧೆಗಳಿಗೆ ಹೆಸರಾದ ಈ ಪತ್ರಿಕೆ ಬಹಳ ಜನಪ್ರಿಯವಾಯಿತು.

ಗ್ರೀಲಿ ತೆರೆದ ಮನಸ್ಸಿನಿಂದ ಎಲ್ಲ ಅಭಿಪ್ರಾಯಗಳನ್ನೂ ಪರ್ಯಾಲೋಚಿಸಿ, ಹೊಸ ಆಲೋಚನೆಗಳನ್ನು ಸ್ವಾಗತಿಸುತ್ತಿದ್ದ. ಅವನ ಸುಂದರ, ಆಕರ್ಷಕ ಶೈಲಿಯ ಬರೆವಣಿಗೆಯಲ್ಲಿ ಹರಿತವಾದ ಮತ್ತು ನಿರ್ಭಯವಾದ ಅಭಿಪ್ರಾಯಗಳು ಪ್ರತಿಪಾದಿಸಲ್ಪಡುತ್ತಿದ್ದುವು. ಗ್ರೀಲಿಯ ಬರಹಗಳು ಜನಾಭಿಪ್ರಾಯದ ಮೇಲೆ ನಿರ್ಣಾಯಕವಾದ ಪ್ರಭಾವ ಹೊಂದಿದ್ದುವು. ಈತ ತನ್ನ ಲೇಖನಗಳ ಮೂಲಕ ಸಾಮಾಜಿಕ ಮತ್ತು ಶೈಕ್ಷಣಿಕ ಸುಧಾರಣೆಯ ಪ್ರವರ್ತಕನಾದ. ಭಾವುಕ ಆದರ್ಶವಾದಿಯಾದ ಗ್ರೀಲಿ, ನೈತಿಕ ಮೌಲ್ಯಗಳ ಪ್ರತಿಪಾದನೆಯಲ್ಲಿ ಅಚಲ ನಂಬಿಕೆ ಹೊಂದಿದ್ದ. ಗುಲಾಮಗಿರಿಯ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಿದ. ಉತ್ತರ ದಕ್ಷಿಣ ರಾಜ್ಯಗಳ ವಿಯೋಜನೆಯನ್ನು ಆತ ವಿರೋಧಿಸಿದ. ಉತ್ತರದ ರಾಜ್ಯಗಳ ರಾಜಕೀಯ ಹಾಗೂ ಸಾಮಾಜಿಕ ಚಿಂತನೆಯನ್ನು ರೂಪಿಸುವುದರಲ್ಲಿ ಅವನು ಪ್ರಧಾನ ಪಾತ್ರ ವಹಿಸಿದ. ಅವನಿಗೆ ಕಾರ್ಮಿಕರಲ್ಲಿ ಸಹಾನುಭೂತಿಯಿತ್ತು. ಆತ ದಣಿವರಿಯದೆ ಭಾಷಣ ಮಾಡಬಲ್ಲವನಾಗಿದ್ದ. ದಣಿವರಿಯದೆ ಪತ್ರಿಕೆಗಾಗಿ ದುಡಿದ. 1848ರಲ್ಲಿ ಸ್ವಲ್ಪ ಕಾಲ ಕಾಂಗ್ರೆಸಿನ ಸದಸ್ಯನಾಗಿದ್ದ. ಕಾಂಗ್ರೆಸಿಗೆ ಚುನಾವಣೆ ಹೊಂದಲು ಅವನು ಹಲವು ಬಾರಿ ಯತ್ನಿಸಿ ವಿಫಲನಾದ. ಅಧಿಕಾರಕ್ಕಾಗಿ ಆಸೆಪಟ್ಟನೆಂದು ಹಲವರು ಆತನನ್ನು ಟೀಕಿಸಿದರು. ಅಮೆರಿಕನ್ ಅಂತರ್ಯುದ್ಧದ ಕಾಲದಲ್ಲಿ ಗುಲಾಮಗಿರಿಯ ರದ್ದಿಗಾಗಿ ತೀವ್ರವಾಗಿ ವಾದಿಸುತ್ತಿದ್ದವರ ಪರವಾಗಿ ಗ್ರೀಲಿಯೂ ಇದ್ದ. ಆತ ನ್ಯೂ ಯಾರ್ಕಿನ ರಿಪಬ್ಲಿಕನರ ನಾಯಕನಾಗಿದ್ದ. ಆದರೆ 1864ರಲ್ಲಿ ಲಿಂಕನನಿಗೆ ಇವನು ಬೆಂಬಲ ನೀಡಲು ಹಿಂದೆಗೆದ. ಶಾಂತಿ ಒಪ್ಪಂದ ಮಾಡಿಕೊಳ್ಳಬೇಕೆಂದು ಲಿಂಕನನನ್ನು ಆತ ಒತ್ತಾಯಪಡಿಸಿದ್ದರಿಂದ ಅವನ ಕೀರ್ತಿಗೆ ಕಳಂಕ ಹತ್ತಿತು. ಯುದ್ಧಾನಂತರದಲ್ಲಿ ಅವನ ಕೀರ್ತಿ ಇಳಿಮುಖವಾಯಿತು. ಜೆಫರ್ಸೆನ್ ಡೇವಿಸ್‍ನನ್ನು ವಿಚಾರಣೆಯಿಲ್ಲದೆ ದೀರ್ಘಕಾಲ ಸೆರೆಯಲ್ಲಿಟ್ಟಿದ್ದನ್ನು ಗ್ರೀಲಿ ವಿರೋಧಿಸಿ, ಈತನ ಬಿಡುಗಡೆಯಾಗಬೇಕೆಂದು ವಾದಿಸಿದ್ದು ಸಾರ್ವಜನಿಕರಿಗೆ ಇವನಲ್ಲಿ ಅಭಿಮಾನ ಕಡಿಮೆಯಾಗಲು ಇನ್ನೊಂದು ಕಾರಣ. 1868ರ ಚುನಾವಣೆಯಲ್ಲಿ ಅಧ್ಯಕ್ಷತೆಗೆ ಯು.ಎಸ್.ಗ್ಯ್ರಾಂಟನ ಉಮೇದುವಾರಿಕೆಗೆ ಆತ ಮೊದಲು ಬೆಂಬಲ ನೀಡಿದನಾದರೂ ಅನಂತರ ವಿರೋಧಿಸಿದ. ಕೆಲವು ಉದಾರವಾದಿ ರಿಪಬ್ಲಿಕನರು ಗ್ರೀಲಿಯನ್ನೆ ಅಧ್ಯಕ್ಷತೆಗೆ ನಿಲ್ಲಿಸಲು ಯತ್ನಿಸಿದರು. ಡೆಮೋಕ್ರಾಟಿಕ್ ರಾಷ್ಟ್ರೀಯ ಸಭೆಯಲ್ಲಿ ಇವನ ಉಮೇದುವಾರಿಕೆಗೆ ಒಪ್ಪಿಗೆ ದೊರೆಯಿತು. ಆದರೆ ಹಲವರು ಇವನಿಗೆ ಬೆಂಬಲ ನೀಡಲಿಲ್ಲ. ಚುನಾವಣೆಯಲ್ಲಿ ಇವನಿಗೆ ಪ್ರಚಂಡ ಸೋಲಾಯಿತು. ಟ್ರಿಬ್ಯೂನಿನ ಸಂಪಾದಕ ಹುದ್ದೆಯನ್ನೂ ಈತ ಕಳೆದುಕೊಂಡ. ಈ ಎಲ್ಲ ಪರಾಜಯಗಳಿಂದಾಗಿ ಇವನ ಮಾನಸಿಕ ಸ್ವಾಸ್ಥ್ಯ ನಷ್ಟವಾಯಿತು. ಗ್ರೀಲಿ 1872ರ ನವೆಂಬರ್ 29ರಂದು ಮರಣಹೊಂದಿದ.

ಸಂಪಾದಕರ ವೈಯಕ್ತಿಕ ಸಾಮಥ್ರ್ಯಕ್ಕೆ ವಿಶೇಷ ಬೆಲೆ ಇದ್ದ ಕಾಲದಲ್ಲಿ ಅತ್ಯಂತ ಪ್ರಭಾವಶಾಲಿ ಸಂಪಾದಕನಾಗಿ ಮೆರೆದ ಗ್ರೀಲಿಯ ಪಾಲಿಗೆ ಹೊಗಳಿಕೆ ತೆಗಳಿಕೆಗಳೆರಡೂ ವಿಶೇಷವಾಗಿ ಲಭ್ಯವಾದುವು. ಆತ ಸತ್ತಾಗ ಎಲ್ಲರೂ ಮುಕ್ತ ಕಂಠದಿಂದ ಅವನ ಸೇವೆಯನ್ನು ಕೊಂಡಾಡಿದರು. ಆತ ರಾಷ್ಟ್ರಪತಿಯ ಪ್ರಶಂಸೆಯನ್ನೂ ಗಳಿಸಿದ. ಹಿಂಟ್ಸ್ ಟುವಡ್ರ್ಸ್ ರಿಫಾಮ್ರ್ಸ್ (1850), ಗ್ಲಾನ್ಸಸ್ ಅಟ್ ಯೂರೋಪ್ (1851), ಹಿಸ್ಟೊರಿ ಆಫ್ ದಿ ಸ್ಟ್ರಗಲ್ ಫಾರ್ ಸ್ಲೇವರಿ ಎಕ್ಸ್‍ಟೆನ್ಷನ್ ಆರ್ ರಿಸ್ಟ್ರಿಕ್ಷನ್ ಇನ್ ದಿ ಯುನೈಟೆಡ್ ಸ್ಟೇಟ್ಸ್ (1856), ಓವಲ್ರ್ಯಾಂಡ್ ಜರ್ನಿ ಫ್ರಂ ನ್ಯೂ ಯಾರ್ಕ್ ಟು ಸ್ಯಾನ್ ಫ್ರಾನ್ಸಿಸ್ಕೊ ಇನ್ ದಿ ಸಮ್ಮರ್ ಆಫ್ 1859 (1860), ದಿ ಅಮೆರಿಕನ್ ಕಾನ್‍ಫ್ಲಿಕ್ಟ್ (1864-1866), ರಿಕಲೆಕ್ಷನ್ಸ್ ಆಫ್ ಎ ಬಿಸಿ ಲೈಫ್ (1868) ಎಸ್ಸೇಸ್ ಆನ್ ಪೊಲಿಟಿಕಲ್ ಎಕಾನೊಮಿ (1869), ವ್ಹಾಟ್ ಐ ನೋ ಆಫ್ ಫಾರ್ಮಿಂಗ್ (1871) ಇವು ಈತನ ಕೆಲವು ಪುಸ್ತಕಗಳು.
(ಕೆ.ಆರ್.ಡಿ.)
(ಆರ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ